ಎಷ್ಟೊಂದು ಮುಗ್ಧರು ನಾವು,
ಕೆತ್ತಿದ ಕಲ್ಲನ್ನು ದೇವರೆಂದು ಪೂಜಿಸುವೆವು,
ಮಳೆಯನ್ನು ವರುಣನೆಂದು, ಗಾಳಿಯನ್ನು ವಾಯುವೆಂದು,
ಬೆಂಕಿಯನ್ನು ಅಗ್ನಿ ದೇವನೆಂದು ಆರಾಧಿಸುವೆವು,
ಶಿಲೆಗೆ ವಿವಿಧ ರೂಪದ ಮನುಷ್ಯನ ಆಕಾರ ನೀಡಿ ಸರ್ವಶಕ್ತನೆನ್ನುವೆವು,
ಕಲ್ಲಿನ ಮೂರ್ತಿಗೆ ಹಾಲು, ತುಪ್ಪ, ಹಣ್ಣುಗಳ ಅಭಿಷೇಕ ಮಾಡುವೆವು,
ಅಭಿನಯಿಸುವ ನಟ ನಟಿಯರನ್ನು ದೇವರೆಂಬತೆ ಪರಿಗಣಿಸುವೆವು,
ಖಾವಿ ಬಟ್ಟೆಯ ಸ್ವಾಮೀಜಿಗಳನ್ನು ದೇವರ ಅವತಾರಗಳೆಂಬಂತೆ ಭಾವಿಸುವೆವು,
ಭವಿಷ್ಯ ಹೇಳುವ ಜ್ಯೋತಿಷಿಗಳನ್ನು ದೈವವಾಣಿಯ ವಕ್ತಾರರೆಂದು ನ೦ಬುವೆವು,
ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎನ್ನುವ ರಾಜಕಾರಣಿಗಳಿಗೆ ಜೈಕಾರ ಹಾಕುವೆವು,
ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ಪೂಜನೀಯ ಸ್ಥಾನ ನೀಡುವೆವು.
ಹೌದಲ್ಲವೇ ?,...... ಹಾಗಾದರೆ....
ಎಷ್ಟೊಂದು ಒಳ್ಳೆಯವರು, ಎಷ್ಟೊಂದು ದೈವಭಕ್ತರು, ಎಷ್ಟೊಂದು ಮುಗ್ಧರು ನಾವುಗಳು,
ಆದರೆ, ...
ಅದೇ ಕಲ್ಲಿನ ದೇವರನ್ನು ಅನೇಕರಿಗೆ ಮುಟ್ಟಲೂ ಬಿಡುವುದಿಲ್ಲ,
ಅದೇ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕೊಡುವುದಿಲ್ಲ,
ಪ್ರಕೃತಿಯನ್ನು ಧಾರಾಳವಾಗಿ ನಾಶಮಾಡುತ್ತಿದ್ದೇವೆ,
ವಿಗ್ರಹಗಳಿಗೆ ಸುರಿಯುವ ಹಾಲು ಹಣ್ಣುಗಳನ್ನು ಹಸಿದವರಿಗೆ ನೀಡುವುದಿಲ್ಲ,
ಅದೇ ಹೆಣ್ಣನ್ನು ವರದಕ್ಷಿಣೆಗಾಗಿ ಸುಡುತ್ತಿರುವವರು ನಾವೇ,
ಅದೇ ಮಹಿಳೆಯರಿಗೆ ವೇಶ್ಯೆ ಪಟ್ಟ ಕಟ್ಡಿರುವವರು ನಾವೇ,
ಅದೇ ರಾಜಕಾರಣಿಗಳಿ೦ದ ಮೋಸ ಹೋಗುತ್ತಿರುವವರು ನಾವೇ,
ಜ್ಯೋತಿಷ್ಯ ನ೦ಬಿ ಸೃಷ್ಟಿಗೇ ಅವಮಾನ ಮಾಡುತ್ತಿರುವವರು ನಾವೇ,
ಅಭಿನಯಿಸುವ ನಟ ರಾಜನ೦ತಾದರೆ ದುಡಿಯುವ ರೈತ ಆಳಾದ,
ಸರ್ವಶಕ್ತ ,ಜಗದ್ ರಕ್ಷಕ, ಸರ್ವಜನ ಹಿತರಕ್ಷಕ ಭಗವ೦ತನಾದರೆ,
ಈ ಮೇಲು ಜಾತಿ, ಕೀಳು ಜಾತಿ ಕರಿಯ ಬಿಳಿಯ, ಬಡವ ಶ್ರೀಮ೦ತ ಸೃಷ್ಡಿಸಿದವರಾರು, ಅದನ್ನೇಕೆ ಆ ಸರ್ವಶಕ್ತ ತಡೆಯಲಿಲ್ಲ.
ಈಗ ಆತ್ಮವಿಮರ್ಶೆ ಮಾಡಿಕೊಳ್ಳೋಣ,....
ನಾವು ಮುಗ್ಧರೋ, ಜ್ಞಾನಿಗಳೋ, ದೈವಭಕ್ತರೋ, ಅಜ಼್ಞಾನಿಗಳೋ, ಆಷಾಡಭೂತಿಗಳೋ,
ಅನುಕೂಲ ಸಿ೦ಧುಗಳೋ, ಅಥವಾ ಯಾವುದನ್ನೂ ವಿಮರ್ಶಿಸದೆ ಭಯಪಟ್ಟು
ಯಥಾಸ್ಥಿತಿ ಒಪ್ಪುವ ಮೂರ್ಖರೋ, ನನಗೂ ಗೊ೦ದಲಗಳಿವೆ.
ಕ್ಷಮೆ ಇರಲಿ
ನಿಮ್ಮ ನ೦ಬಿಕೆಗಳನ್ನು ಪ್ರಶ್ನೆ ಮಾಡಿದ್ದಕ್ಕೆ,
ಸತ್ಯದ ಹುಡುಕಾಟದಲ್ಲಿ ಪ್ರಶ್ನೆಗಳು ಸಹಜ.
*ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.*
*ಇದು ಮನಸ್ಸುಗಳ ಅಂತರಂಗದ ಚಳವಳಿ.*